ಹೊಳಲ್ಕೆರೆ
	ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕೂ ಚಿತ್ರದುರ್ಗಜಿಲ್ಲೆಯ ಚಿತ್ರದುರ್ಗ ತಾಲ್ಲೂಕುಗಳೂ ಪೂರ್ವದಲ್ಲಿ ಹಿರಿಯೂರು, ದಕ್ಷಿಣದಲ್ಲಿ ಹೊಸದುರ್ಗ, ನೈಋತ್ಯದಲ್ಲಿ ಚಿಕ್ಕಮಗಳೂರಿನ ತರೀಕೆರೆ, ಪಶ್ಚಿಮದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕೂ ಸುತ್ತುವರಿದಿವೆ. ತಾಳ್ಯ, ರಾಮಗಿರಿ, ಹೊಳಲ್ಕೆರೆ, ಭರಮನಾಯ್ಕನ ದುರ್ಗ ಹೋಬಳಿಗಳು. ಒಟ್ಟು 201 ಗ್ರಾಮಗಳಿವೆ. ತಾಲ್ಲೂಕು ವಿಸ್ತೀರ್ಣ 1,097.4 ಚ.ಕಿಮೀ. ಜನಸಂಖ್ಯೆ 1,98,757.

	ತಾಲ್ಲೂಕಿನಲ್ಲಿ ದಕ್ಷಿಣದಿಂದ ಉತ್ತರದ ಅರಸನಘಟ್ಟದ ವರೆಗೆ ಬೆಟ್ಟಶ್ರೇಣಿಯೊಂದು ಹಾದುಹೋಗಿದ್ದು ಅದರ ಒಂದು ಕವಲು ಪಶ್ಚಿಮದಲ್ಲಿ ರಾಮಗಿರಿ ದುರ್ಗದ ವರೆಗೂ ಚಾಚಿಕೊಂಡಿದೆ. ಇದಲ್ಲದೆ ಕೂಡು, ರಾಮಗಿರಿ ಮತ್ತು ಗುಂಡೇರಿಗಳಲ್ಲಿ ಸಣ್ಣ ಬೆಟ್ಟಗಳಿವೆ. ಇವುಗಳಲ್ಲಿ ದೇವರಗುಡ್ಡ ಅರಣ್ಯದ ದೊಡ್ಡಹೊಟ್ಟೆ ರಂಗಪ್ಪನ ಗುಡ್ಡ ಮತ್ತು ಜಾನಕಲ್ಲಿನ ವಡೇರಗುಡ್ಡ ಮುಖ್ಯವಾದವು. ಸ್ಯಾಗಲಹಳ್ಳ ಈ ಬೆಟ್ಟಗಳ ಮಧ್ಯೆ ಹುಟ್ಟಿ ತುಂಗಭದ್ರಾ ನದಿಯನ್ನು ಸೇರುವುದು. ಶಿವಗಂಗೆ ಬೆಟ್ಟಗಳಲ್ಲಿ ಬಾಕ್ಸೈಟ್ ಅದರು, ಕುಡಿನೀರು ಕಟ್ಟೆ ಬಳಿ ವರ್ಮಿಕುಲೇಟ್, ಲೋಕದೊಳಲಿನ ಬಳಿ ಬಳಪದ ಕಲ್ಲು ಸಿಗುವುದು ಮತ್ತು ತಾಲ್ಲೂಕಿನಲ್ಲಿ ಕ್ಯಾನೈಟ್, ಕಬ್ಬಿಣದ ಅದುರಿನ ಹರವುಗಳು ಕಂಡುಬಂದಿವೆ. ತಾಲ್ಲೂಕಿನಲ್ಲಿ 8,916 ಹೆಕ್ಟೇರ್ ಸಾಮಾನ್ಯ ಅರಣ್ಯ ಪ್ರದೇಶವಿದೆ. ಈ ಪ್ರದೇಶದಲ್ಲಿ ಜಿಂಕೆಗಳು ಕಂಡುಬರುತ್ತವೆ. ಬೇಸಗೆಯ ತಾಪ ಹೆಚ್ಚಿದ್ದು ಚಳಿಗಾಲ ಹಿತಕರವಾಗಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 640.16 ಮಿಮೀ. ಈ ತಾಲ್ಲೂಕಿನ ಮುತ್ತುಗದೂರು ಕೆರೆ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದು. ವ್ಯವಸಾಯಕ್ಕೆ ಅನುಕೂಲವಾದ ಅನೇಕ ನೀರಾವರಿ ಬಾವಿಗಳಿವೆ. ತಾಲ್ಲೂಕಿನಲ್ಲಿ ಹೆಚ್ಚು ಕಪ್ಪುಮಣ್ಣಿನ ಪ್ರದೇಶದ ಜೊತೆಗೆ ಕೆಂಪುಮಣ್ಣುಮಿಶ್ರಿತ ಕಪ್ಪುಭೂಮಿ ಇದೆ. ಒಟ್ಟಿನಲ್ಲಿ ಫಲವತ್ತಾದ ಭೂಮಿಯಿದ್ದು ನೀರಾವರಿ ಸಹಾಯದಿಂದ ಬತ್ತ, ಜೋಳ, ರಾಗಿ, ತೊಗರಿ, ಇತರ ದ್ವಿದಳ ಧಾನ್ಯಗಳನ್ನೂ ಹತ್ತಿಯನ್ನೂ ಬೆಳೆಯುತ್ತಾರೆ. ವ್ಯವಸಾಯದ ಜೊತೆಗೇ ಪಶುಪಾಲನೆಯುಂಟು.

	ತಾಲ್ಲೂಕಿನಲ್ಲಿ ಮ್ಯಾಂಗನೀಸ್ ಗಣಿ ಉದ್ಯಮ ಮತ್ತು ಕೆಲವು ಗ್ರಾಮೋದ್ಯೋಗಗಳಿವೆ. ತಾಲ್ಲೂಕಿನಲ್ಲಿ ಚನ್ನಗಿರಿ-ಚಿತ್ರದುರ್ಗ ರಾಜ್ಯ ಹೆದ್ದಾರಿಯ ಜೊತೆಗೆ ಹೊಸದುರ್ಗ-ದಾವಣಗೆರೆ ಜಿಲ್ಲಾ ಹೆದ್ದಾರಿ ಹಾದುಹೋಗಿದೆ. ಸುತ್ತಲ ಗ್ರಾಮ ಮತ್ತು ಪಟ್ಟಣಗಳಿಗೆ ಮಾರ್ಗಸಂಪರ್ಕಗಳಿವೆ. ಬೆಂಗಳೂರು-ಧಾರವಾಡ ಮತ್ತು ಚಿತ್ರದುರ್ಗ ರೈಲು ಮಾರ್ಗವಿದ್ದು ತಾಲ್ಲೂಕಿನ ಅಭಿವೃದ್ಧಿಗೆ ನೆರವಾಗಿದೆ.

	ಹೊಳಲ್ಕೆರೆಯ ವಾಯವ್ಯಕ್ಕೆ 11 ಕಿಮೀ ದೂರದಲ್ಲಿರುವ ಚಿಕ್ಕಜಾಜೂರು ಬೆಂಗಳೂರು-ಧಾರವಾಡ ರೈಲುಮಾರ್ಗದ ಒಂದು ಮುಖ್ಯ ರೈಲುನಿಲ್ದಾಣ ಮತ್ತು ಚಿತ್ರದುರ್ಗಕ್ಕೆ ಇಲ್ಲಿಂದಲೇ ರೈಲು ಸಂಪರ್ಕ ವಿರುವುದು. ಚಿಕ್ಕಜಾಜೂರಿನ ಈಶಾನ್ಯಕ್ಕೆ ಸು. 12 ಕಿಮೀ ದೂರದಲ್ಲಿ ಚಿತ್ರದುರ್ಗದ ಪಾಳೆಯಗಾರರಲ್ಲಿ ಒಬ್ಬನಾದ ಭರಮಪ್ಪನಾಯಕ ಕಟ್ಟಿಸಿದ್ದೆಂದು ಹೇಳುವ ಭೀಮಸಮುದ್ರ ಎಂಬ ದೊಡ್ಡಕೆರೆ ಇದೆ. ಹೊಳಲ್ಕೆರೆಯ ಪಶ್ಚಿಮಕ್ಕೆ 10 ಕಿಮೀ ದೂರದಲ್ಲಿರುವ ಮಲ್ಲಾಡಿಹಳ್ಳಿಯಲ್ಲಿರುವ ಅನಾಥ ಸೇವಾಶ್ರಮ ಹೆಸರಾದದ್ದು.

	ಹೊಳಲ್ಕೆರೆ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿಯಲ್ಲಿ ಚಿತ್ರದುರ್ಗಕ್ಕೆ ನೈಋತ್ಯದಲ್ಲಿ 32 ಕಿಮೀ ದೂರದಲ್ಲಿದೆ. ಜನಸಂಖ್ಯೆ 14,571. ಪಟ್ಟಣದ ಪಶ್ಚಿಮಕ್ಕೆ 5 ಕಿಮೀ ದೂರದಲ್ಲಿ ಹೊಳಲ್ಕೆರೆಯ ರೈಲು ನಿಲ್ದಾಣವಿದೆ. ಈ ಪಟ್ಟಣ ಅಡಕೆ, ರಾಗಿ, ಜೋಳ ಮುಂತಾದವುಗಳ ವ್ಯಾಪಾರ ಕೇಂದ್ರ. ರಾಜ್ಯ ಹೆದ್ದಾರಿಯಲ್ಲಿದ್ದು ಸುತ್ತಲ ಗ್ರಾಮಗಳಿಗೆ ಇದೊಂದು ಮುಖ್ಯ ವ್ಯಾಪಾರ ಸ್ಥಳವಾಗಿದೆ.

	ಹತ್ತನೆಯ ಶತಮಾನದಲ್ಲಿ ಈ ಊರು ಪೊಳಲಕೆರೆ ಎಂಬ ಹೆಸರಿನಲ್ಲಿ ಪ್ರಸಿದ್ಧ ಜೈನಕ್ಷೇತ್ರವಾಗಿತ್ತು. ಈ ಊರನ್ನು ಹದಿನಾಲ್ಕನೆಯ ಶತಮಾನದಲ್ಲಿ ಬೋಯನಾಯಕನೆಂಬುವನು ಕಟ್ಟಿಸಿದ. ಕಾಲಾನಂತರದಲ್ಲಿ ಇದನ್ನು ಬಸವಾಪಟ್ಟಣದ ಪಾಳೆಯಗಾರರು ವಶಪಡಿಸಿಕೊಂಡರು. ಇದನ್ನು 1475ರಲ್ಲಿ ಚಿತ್ರದುರ್ಗದ ಪಾಳೆಯಗಾರ ತಿಮ್ಮಣ್ಣನಾಯಕ ವಿಜಯನಗರದ ದೊರೆಗಳಿಂದ ಪಡೆದ. ಹೈದರ್ ಅಲಿ ಇದನ್ನು ಗೆದ್ದುಕೊಳ್ಳುವ ವರೆಗೆ ಈ ಊರು ಚಿತ್ರದುರ್ಗದವರ ವಶದಲ್ಲಿಯೇ ಇತ್ತು. ಮರಾಠ ದಂಡಯಾತ್ರೆಯ ಕಾಲದಲ್ಲಿ ಈ ಊರು ಅವರ ದುರಾಕ್ರಮಣಕ್ಕೆ ಸಿಕ್ಕಿತು. ಇಲ್ಲಿರುವ ಬಯಲು ಗಣಪತಿ ವಿಗ್ರಹ 9 ಎತ್ತರವಾಗಿದ್ದು ನೋಡಲು ಸುಂದರವಾಗಿದೆ.							
			(ಎಸ್.ಕೆ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ